Wednesday, March 18, 2020

ಯುಗಾದಿ - ಶಾರ್ವರಿ ವರ್ಷಾರಂಭ (Ugadi - Sharvari varsharambha) - 4

ಪ್ರಸ್ತುತ ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ. ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಇಂತಹ ಶುಭ ದಿನದಂದು ನಮ್ಮ ಶರೀರದಲ್ಲಿ ನವೀನತೆ ಉಂಟಾಗಲು ಎಳ್ಳೆಣ್ಣೆಯಿಂದ ಅಭ್ಯಂಜನವನ್ನು ಮಾಡುವುದಿದೆ. 

ಸೃಷ್ಟಿಕರ್ತನಾದ ಬ್ರಹ್ಮನು ಸೃಷ್ಟಿಯನ್ನು ಮೊದಲು ಮಾಡಿದ ದಿನ. ಕೃತಯುಗದ ಪ್ರಾರಂಭದ ದಿನ. ಆದ್ದರಿಂದಲೇ ಕೃತಯುಗದ ಲಕ್ಷಣಗಳು ಈ ಯುಗಾದಿ ದಿನದಂದು ಇರುತ್ತದೆ. ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ಕಾ ರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಒಂದು ಪದ್ಧತಿಯನ್ನು ತಂದಿದ್ದಾರೆ. 

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ||

ಬೇವಿನ ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ಲೆಕ್ಕರಸ, ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ.

ಹಬ್ಬವನ್ನು ಸತ್ಯ ವಿಧಾನವಾದ ಮನಸ್ಸಿನಿಂದ, ನಿಷ್ಠೆಯಿಂದ ಆಚರಿಸೋಣ. ಹಬ್ಬದ ಸಂಪೂರ್ಣ ಪ್ರಯೋಜನವನ್ನು ಪಡೆಯೋಣ. ವಿಶ್ವವನ್ನೆಲ್ಲಾ ವ್ಯಾಪಿಸಿ ಬೆಳಗುತ್ತಿರುವ ಲೋಕವಂದ್ಯನೂ ಮಹಾಯೋಗೇಶ್ವರನೂ, ಸುರೇಶ್ವರನೂ ಆದ ಭಗವಂತನನ್ನು ನಮ್ಮಲ್ಲಿ ನಾವು ಕಾಣುವಂತಾಗಲಿ. ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯು ದೊರಕಲಿ.

ನಾಳೆ ಮುಂದುವರೆಯುವುದು.......
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages