Saturday, March 21, 2020

ಯುಗಾದಿ - ಪಂಚಾಗ ಶ್ರವಣ (Ugadi - Panchanga Shravana) - 7

ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು. ಕಡೇಪಕ್ಷ ಅವುಗಳ ತಿಳುವಳಿಕೆಯಾದರೂ ಇರಬೇಕು. ಯುಗದ ಆದಿಯ ದಿನವಾದ ಇಂದು, ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ಈ ರೀತಿಯಾಗಿ ಪಂಚಾಂಗ ಶ್ರವಣ ಮಾಡುವ ಜ್ಯೋತಿಷರಿಗೆ ಕೃತಜ್ಞತೆಯಿಂದ ಯಥೋಚಿತ ಸಂಭಾವನೆ ನೀಡುವುದು ಕ್ರಮ.

ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನ ಮುಂತಾದವುಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages