Monday, March 23, 2020

ಯುಗಾದಿ (Ugadi) - 9

ಯುಗಾದಿ ಎಂಬ ಪದವೇ ಹೇಳುವಂತೆ, "ಯುಗಸ್ಯ ಆದಿ" ಯುಗಾದಿ, ಯುಗದ ಪ್ರಾರಂಭ ಎಂದರ್ಥ. ಯುಗ ಎಂದರೆ ಜೋಡಿ-ನೊಗ ಎಂಬ ಅರ್ಥಗಳಿವೆ. ಪ್ರಕೃತಿ-ಪುರುಷ ಶಕ್ತಿಗಳು ಕೂಡಿ ಸೃಷ್ಟಿ ಪ್ರಾರಂಭಿಸಿದ ದಿನ. ಯುಗಗಳು ನಾಲ್ಕು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು. ಶ್ರೀರಂಗಮಹಾಗುರುಗಳು ತಮ್ಮ ಯುಗಾದಿಯ ಸಂದೇಶಾಮೃತದಲ್ಲಿ ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಬ್ರಹ್ಮನು ಈ ದಿನ ಜಗತ್ತನ್ನು ಸೃಷ್ಟಿಸಿದನು.

ಅವನು ಪ್ರಾರಂಭಿಸಿದ್ದು ಸತ್ಯಯುಗವನ್ನು. ಅಂದರೆ ಸತ್ಯಧರ್ಮಮಯವಾದ ಬಾಳಾಟಕ್ಕೆ ತಕ್ಕ ಯೋಜನೆ ಹಾಕಿಕೊಂಡು ಅದನ್ನು ಪ್ರಾರಂಭಿಸಿವುದಕ್ಕೆ ಅನುಗುಣವಾದ ಧರ್ಮವುಳ್ಳ ದಿನ ಇಂದು. ಸಂಕ್ರಾಂತಿ ದಿನದಂದು "ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದು ಹೇಳುವಂತೆ ಯುಗಾದಿ ದಿನದಂದು "ಬೇವು ಬೆಲ್ಲ ತಿಂದು ಸತ್ಯಧರ್ಮದಿಂದ ಕೂಡಿದ ಬಾಳಾಟವನ್ನು ಮಾಡಿ" ಎಂಬ ಸಂದೇಶವನ್ನು ಈ ಆಚರಣೆಯ ಮಾತಿನಲ್ಲಿ ಅಡಗಿಸಿಟ್ಟಿದ್ದಾರೆ. ಹೊಸ ಸಂವತ್ಸರದ ಪ್ರಾರಂಭ ದಿನ.

ಸಂವತ್ಸರ ಎಂದರೆ ಋತುಗಳು ಪರಿವರ್ತನೆ ಹೊಂದುವ ಕಾಲ. ಆರು ಋತುಗಳಾದ ವಸಂತ, ಗ್ರೀಷ್ಮ ವರ್ಷ, ಶರತ್, ಹೇಮಂತ ಹಾಗೂ ಶಿಶಿರಗಳಲ್ಲಿ ವಸಂತ, ಗ್ರೀಷ್ಮ, ವರ್ಷ ಋತುಗಳು ದಕ್ಷಿಣಾಯನದಲ್ಲಿ ಬರುವ ಋತುಗಳು. ಇದನ್ನು ಆಯುರ್ವೇದದಲ್ಲಿ ವಿಸರ್ಗ ಕಾಲ ಎಂಬುದಾಗಿ ಪರಿಗಣಿಸಿದ್ದಾರೆ. ಅಂದರೆ ಶರತ್, ಹೇಮಂತ, ಶಿಶಿರ ಋತುಗಳು, ಉತ್ತಾರಾಯಣದಲ್ಲಿ ಬರುವ ಋತುಗಳು. ಯುಗಾದಿಯ ವಿಚಾರದಲ್ಲಿ ಜನರಲ್ಲಿ ದ್ವಂದ್ವ, ಗೊಂದಲ ಇದೆ.

ಯುಗಾದಿಯನ್ನು ಆಚರಿಸುವ ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಹಿಂದುಗಳಲ್ಲಿಯೇ ಈ ಗೊಂದಲ ದ್ವಂದ್ವಗಳು ಏಕೆ ಎಂಬ ಪ್ರಶ್ನೆ ಇದೆ. ಭಾರತದಲ್ಲಿ ಈ ಎರಡೂ ಯುಗಾದಿಯ ಆಚರಣೆ ವಾಡಿಕೆಯಲ್ಲಿದೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಿನಕ್ಕೆ ಚಂದ್ರನು ಭೂಮಿಯೊಂದಿಗೆ ಸೂರ್ಯನನ್ನು ಸುತ್ತಿ ಒಂದು ಆವರ್ತ ಸಮಾಪ್ತಿಯಾಗಿ ಮತ್ತೊಂದು ಆವರ್ತ ಪ್ರಾರಂಭವಾಗುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ    


To know more about Astanga Yoga Vijnana Mandiram (AYVM) please visit our Official Website, Facebook and Twitter pages