Tuesday, March 17, 2020

ಯುಗಾದಿ - ಹಿನ್ನೆಲೆ (Ugadi - Hinnele) - 3

ಯುಗಾದಿಯನ್ನು ಒಂದು ಪರ್ವ ಎಂದು ಕರೆಯುತ್ತಾರೆ. ಪರ್ವ ಎಂದರೆ ಗಿಣ್ಣು ಎಂದರ್ಥ. ಕಬ್ಬಿನಲ್ಲಿ ಗಿಣ್ಣುಗಳನ್ನು ನೋಡುತ್ತೇವೆ. ಈ ಗಿಣ್ಣುಗಳಿಗೆ ಪರ್ವ ಎಂದು ಹೆಸರು. ಇದು ಹಳೆಯದಕ್ಕೆ ಅಂತ್ಯ, ಮುಂದಿನದಕ್ಕೆ ಪ್ರಾರಂಭ. ಒಂದು ಸಂಧಿಯ ಕಾಲ.
ಇಂತಹ ಸಂಧಿಕಾಲದಲ್ಲಿ ನಮ್ಮ ಶರೀರದಲ್ಲಿ ಭಗವತ್ ಕಾರ್ಯಕ್ಕೆ ಅನುಕೂಲತೆ ಏರ್ಪಡುತ್ತದೆ. ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಅಂತಹ ವಿಶೇಷ ದಿನಗಳಲ್ಲಿ ಯುಗಾದಿ ಒಂದು. ರಾತ್ರಿ ಕಳೆದು ಹಗಲು, ಹಗಲು ಕಳೆದು ಮಧ್ಯಾಹ್ನ, ಮಧ್ಯಾಹ್ನ ಕಳೆದು ರಾತ್ರಿ. ಹೀಗೆ ಒಂದು ದಿನದಲ್ಲಿ ಮೂರು ಸಂಧ್ಯಾಕಾಲಗಳು ಸಂಭವಿಸುತ್ತದೆ. ಈ ಸಂಧ್ಯಾಕಾಲಗಳು ಯೋಗಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನ, ಪ್ರಾರ್ಥನೆ, ಭಜನೆ, ಪೂಜಾ, ಮಂಗಳಾರತಿಗೆ ಯೋಗ್ಯಕಾಲ. ಸಂಧ್ಯಾಕಾಲದಲ್ಲಿ ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಕಾಲ. ಹಾಗೆಯೇ ಇಡೀ ಒಂದು ವರ್ಷದಲ್ಲಿ ಆತ್ಮಸಾಧನೆಗೆ, ಭಗವಂತನ ಅನುಗ್ರಹಕ್ಕೆ ಯೋಗ್ಯ ಕಾಲಗಳು ಒದಗಿಬರುತ್ತದೆ. ಅಂತಹ ದಿನಗಳಲ್ಲಿ ಗ್ರಹ, ನಕ್ಷತ್ರಾದಿಗಳಲ್ಲಿ ಯೋಗ ಉಂಟಾದಾಗ ಅವುಗಳನ್ನು ಹಬ್ಬಗಳನ್ನಾಗಿ ಆಚರಿಸುತ್ತಿದ್ದೇವೆ. ಗಣೇಶನ ಅನುಗ್ರಹಕ್ಕೆ ಅನುಕೂಲವಾದ ತಿಥಿ, ಪಕ್ಷದಂದು ಗಣಪತಿ ವ್ರತ ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರಾದ ಆರ್ಯ ಋಷಿಗಳು ಆಯಾ ದೇವತಾ ಅನುಗ್ರಹಕ್ಕೆ ಸಹಜವಾಗಿ ಯೋಗ ಕೂಡಿಬರುವುದನ್ನು ಗುರುತಿಸಿ ಹಬ್ಬಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿರುತ್ತಾರೆ. ಹಬ್ಬ ಯಾವ ಋತುವಿನಲ್ಲಿರುತ್ತದೆಯೋ ಅದಕ್ಕೆ ತಕ್ಕಂತಹ ಆಹಾರ, ಭಕ್ಷ್ಯ ಅಂದು ಮಾಡುವ ಸಂಪ್ರದಾಯವಿದೆ. ಆಯಾ ದೇವತಾ ಪ್ರಸನ್ನತೆಗೆ ನಮ್ಮೀ ಶರೀರವು ಬಿಟ್ಟುಕೊಡುವಂತೆ ನಮ್ಮಲ್ಲಿ ಧಾತುಸಾಮ್ಯತೆ ಉಂಟಾಗುವಂತೆ ಮಾಡುವ ವ್ಯವಸ್ಥೆ ಇದು. ರಾಮನವಮಿಯಲ್ಲಿ ಬಿಸಿಲ ಬೇಗೆಗೆ ಶರೀರದಲ್ಲಿಯ ಉಷ್ಣತೆ ಕಡಿಮೆ ಮಾಡಿ ಧಾತು ಸಾಮ್ಯತೆ ತರಲು ಕೋಸಂಬರಿ, ಪಾನಕ, ಗಣೇಶ ಚತುರ್ಥಿಯಂದು ಮೂಲಾಧಾರಕ್ಕೆ ಪುಷ್ಟಿಯನ್ನು ನೀಡುವ ಚಕ್ಕಲಿ ಭಕ್ಷ್ಯ ಸೇವನೆ ಮಾಡುವ ಕ್ರಮ ಇರುವುದಾಗಿದೆ. ನಾಳೆ ಮುಂದುವರೆಯುವುದು....... ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages