Showing posts with label habbagalu. Show all posts
Showing posts with label habbagalu. Show all posts

Wednesday, March 25, 2020

ಯುಗಾದಿ - ಆಚರಣೆ ಅಂತರ್ಥ (Ugadi - Aacharaneya Antharartha) - 11

ಆಚರಣೆ ಅಂತರ್ಥ ದಕ್ಷಿಣಭಾರತದಲ್ಲಿ ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಪಕ್ಷಗಳಲ್ಲಿ ಶುಕ್ಲಪಕ್ಷವು ದೇವತೆಗಳಿಗೆ ಪ್ರಿಯವಾದದ್ದು. ಪಿತೃ ಪಕ್ಷವು ಪತೃಗಳಿಗೆ ಪ್ರಿಯವಾದುದು. ನವವರ್ಷದ ಪ್ರಥಮ ದೇವತಾ ಪೂಜೆಯೇ ಪ್ರಧಾನವಾಗಿರುವ ಯುಗಾದಿ ಶುಭಪರ್ವದ ಆಚರಣೆಗೆ ಶುಕ್ಲಪಕ್ಷವೇ ತಕ್ಕದಾದುದ್ದು. ಸೃಷ್ಟಿ ಮತ್ತು ಧಾರಣೆ ಪೋಷಣೆಗಳಿಗೆ ಅನ್ನ ಮತ್ತು ಔಷದಿಗಳು ಬೇಕು. ಆ ಔಷದಿಗಳಿಗೆಲ್ಲಾ ರಾಜನಾದ ಸೋಮ(ಚಂದ್ರ)ನು ವೃದ್ಧಿಯಾಗುವ ಪ್ರಥಮ ದಿವಸ. ಉಳಿದ ತಿಥಿಗಳಲ್ಲಿ ಚಂದ್ರನು ಅಪೂರ್ಣನಾಗಿರುತ್ತಾನೆ. ಅಥವಾ ಪೂರ್ಣನಾಗಿರುತ್ತಾನೆ. ಆರಂಭದ ದಿವಸಗಳಾಗುವುದಿಲ್ಲ. ಆದುದರಿಂದ ವರ್ಷದ ಪ್ರಥಮ ದಿನವನ್ನಾಗಿ ಚೈತ್ರ, ಶುಕ್ಲ ಪ್ರಥಮೆಯನ್ನೇ ಪರಿಗಣಿಸುವುದು ಯುಕ್ತವಾಗಿದೆ.

ಸೌರಮಾನ ಯುಗಾದಿಯಂದು ಸೂರ್ಯನು ರಾಶಿಚಕ್ರದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಇವುಗಳೆಲ್ಲವೂ ಪರ್ವಗಳೇ. ಅವುಗಳಲ್ಲಿ ಮೇಷ ಸಂಕ್ರಮಣವು ಅತ್ಯಂತ ಶುಭವಾದ ಕಾಲ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಲೇಖಕರು: ಡಾII ಯಶಸ್ವಿನೀ  


To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 24, 2020

ಚಾಂದ್ರಮಾನ-ಸೌರಮಾನ ಯುಗಾದಿ (Chandramana - Sauramana - Ugadi) - 10

ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನು ಮೇಷ, ವೃಷಭ, ಮಿಥುನಾದಿ 12 ನಕ್ಷತ್ರಗಳ ಗುಚ್ಛವನ್ನು ಸಂಕ್ರಮಿಸುತ್ತಾನೆ. ಮೇಷ ಸಂಕ್ರಮಣದಂದು ಸೂರ್ಯನ ಒಂದು ಆವರ್ತನೆ ಮುಗಿಯುತ್ತದೆ. ಹೊಸ ಆವರ್ತ ಪ್ರಾರಂಭವಾಗುತ್ತದೆ. ಈ ರೀತಿ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಹೆಚ್ಚಾಗಿ ಉತ್ತರ ಭಾರತದವರು ಸೌರಮಾನ ಯುಗಾದಿಯನ್ನು "ಚಿತ್ರವಿಪು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.

ನಾಳೆ ಮುಂದುವರೆಯುವುದು...
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, March 23, 2020

ಯುಗಾದಿ (Ugadi) - 9

ಯುಗಾದಿ ಎಂಬ ಪದವೇ ಹೇಳುವಂತೆ, "ಯುಗಸ್ಯ ಆದಿ" ಯುಗಾದಿ, ಯುಗದ ಪ್ರಾರಂಭ ಎಂದರ್ಥ. ಯುಗ ಎಂದರೆ ಜೋಡಿ-ನೊಗ ಎಂಬ ಅರ್ಥಗಳಿವೆ. ಪ್ರಕೃತಿ-ಪುರುಷ ಶಕ್ತಿಗಳು ಕೂಡಿ ಸೃಷ್ಟಿ ಪ್ರಾರಂಭಿಸಿದ ದಿನ. ಯುಗಗಳು ನಾಲ್ಕು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು. ಶ್ರೀರಂಗಮಹಾಗುರುಗಳು ತಮ್ಮ ಯುಗಾದಿಯ ಸಂದೇಶಾಮೃತದಲ್ಲಿ ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಬ್ರಹ್ಮನು ಈ ದಿನ ಜಗತ್ತನ್ನು ಸೃಷ್ಟಿಸಿದನು.

ಅವನು ಪ್ರಾರಂಭಿಸಿದ್ದು ಸತ್ಯಯುಗವನ್ನು. ಅಂದರೆ ಸತ್ಯಧರ್ಮಮಯವಾದ ಬಾಳಾಟಕ್ಕೆ ತಕ್ಕ ಯೋಜನೆ ಹಾಕಿಕೊಂಡು ಅದನ್ನು ಪ್ರಾರಂಭಿಸಿವುದಕ್ಕೆ ಅನುಗುಣವಾದ ಧರ್ಮವುಳ್ಳ ದಿನ ಇಂದು. ಸಂಕ್ರಾಂತಿ ದಿನದಂದು "ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದು ಹೇಳುವಂತೆ ಯುಗಾದಿ ದಿನದಂದು "ಬೇವು ಬೆಲ್ಲ ತಿಂದು ಸತ್ಯಧರ್ಮದಿಂದ ಕೂಡಿದ ಬಾಳಾಟವನ್ನು ಮಾಡಿ" ಎಂಬ ಸಂದೇಶವನ್ನು ಈ ಆಚರಣೆಯ ಮಾತಿನಲ್ಲಿ ಅಡಗಿಸಿಟ್ಟಿದ್ದಾರೆ. ಹೊಸ ಸಂವತ್ಸರದ ಪ್ರಾರಂಭ ದಿನ.

ಸಂವತ್ಸರ ಎಂದರೆ ಋತುಗಳು ಪರಿವರ್ತನೆ ಹೊಂದುವ ಕಾಲ. ಆರು ಋತುಗಳಾದ ವಸಂತ, ಗ್ರೀಷ್ಮ ವರ್ಷ, ಶರತ್, ಹೇಮಂತ ಹಾಗೂ ಶಿಶಿರಗಳಲ್ಲಿ ವಸಂತ, ಗ್ರೀಷ್ಮ, ವರ್ಷ ಋತುಗಳು ದಕ್ಷಿಣಾಯನದಲ್ಲಿ ಬರುವ ಋತುಗಳು. ಇದನ್ನು ಆಯುರ್ವೇದದಲ್ಲಿ ವಿಸರ್ಗ ಕಾಲ ಎಂಬುದಾಗಿ ಪರಿಗಣಿಸಿದ್ದಾರೆ. ಅಂದರೆ ಶರತ್, ಹೇಮಂತ, ಶಿಶಿರ ಋತುಗಳು, ಉತ್ತಾರಾಯಣದಲ್ಲಿ ಬರುವ ಋತುಗಳು. ಯುಗಾದಿಯ ವಿಚಾರದಲ್ಲಿ ಜನರಲ್ಲಿ ದ್ವಂದ್ವ, ಗೊಂದಲ ಇದೆ.

ಯುಗಾದಿಯನ್ನು ಆಚರಿಸುವ ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಹಿಂದುಗಳಲ್ಲಿಯೇ ಈ ಗೊಂದಲ ದ್ವಂದ್ವಗಳು ಏಕೆ ಎಂಬ ಪ್ರಶ್ನೆ ಇದೆ. ಭಾರತದಲ್ಲಿ ಈ ಎರಡೂ ಯುಗಾದಿಯ ಆಚರಣೆ ವಾಡಿಕೆಯಲ್ಲಿದೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಿನಕ್ಕೆ ಚಂದ್ರನು ಭೂಮಿಯೊಂದಿಗೆ ಸೂರ್ಯನನ್ನು ಸುತ್ತಿ ಒಂದು ಆವರ್ತ ಸಮಾಪ್ತಿಯಾಗಿ ಮತ್ತೊಂದು ಆವರ್ತ ಪ್ರಾರಂಭವಾಗುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ    


To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 22, 2020

ಯುಗಾದಿ - ನೈವೇದ್ಯ (Ugadi - Naivedya) - 8

ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು" ಹೂವಿನೊಡನೆ ಕೂಡಿದ ಚಿಗುರಬೇವು, ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೇವಿನಿಂದ ಉಂಟಾಗುವ ವಾತ ವೃದ್ಧಿಯನ್ನು ಶಮನ ಮಾಡಲು ಸುಲಭವಾಗಿ ತಿನ್ನಲಾಗುವಂತೆ ಬೆಲ್ಲದೊಂದಿಗೆ ತಿನ್ನಬೇಕು. ಬೇವಿನ ಚಿಗುರೆಲೆಯ ಪಲ್ಯವು ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರಷನಿಗೆ ಅತಿಪ್ರಿಯವಾದುದು.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 21, 2020

ಯುಗಾದಿ - ಪಂಚಾಗ ಶ್ರವಣ (Ugadi - Panchanga Shravana) - 7

ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು. ಕಡೇಪಕ್ಷ ಅವುಗಳ ತಿಳುವಳಿಕೆಯಾದರೂ ಇರಬೇಕು. ಯುಗದ ಆದಿಯ ದಿನವಾದ ಇಂದು, ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ಈ ರೀತಿಯಾಗಿ ಪಂಚಾಂಗ ಶ್ರವಣ ಮಾಡುವ ಜ್ಯೋತಿಷರಿಗೆ ಕೃತಜ್ಞತೆಯಿಂದ ಯಥೋಚಿತ ಸಂಭಾವನೆ ನೀಡುವುದು ಕ್ರಮ.

ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನ ಮುಂತಾದವುಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, March 20, 2020

ಯುಗಾದಿ - ಗೃಹಾಲಂಕಾರ-ಪೂಜೆ (Ugadi - Gruhaalakara pooje) - 6

ಗೃಹಾಲಂಕಾರ-ಪೂಜೆ: ಗೃಹಾಲಂಕಾರ:- ತಳಿರು ತೋರಣಗಳಿಂದ, ರಂಗವಲ್ಲಿ, ಹೂ ಅಲಂಕಾರಗಳಿಂದ ಇಂದು ಮನೆಯನ್ನೂ, ಪೂಜಾಗೃಹವನ್ನೂ ವಿಶೇಷವಾಗಿ ಅಲಂಕರಿಸಬೇಕು. ಕಣ್ಣುಗಳಿಗೆ ಹಬ್ಬವಾಗಿ ಮನಸ್ಸನ್ನು ಹಸಿರನ್ನಾಗಿ ಮಾಡುತ್ತದೆ. ಮನಸ್ಸನ್ನು ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದ ಅಲಂಕರಿಸಬೇಕು.

ಪೂಜೆ: ನಿತ್ಯವೂ ಪೂಜೆ ಮಾಡಬೇಕು. ಇಂದಿನ ದಿನ ಪ್ರಜಾಪತಿಯು ಸೃಷ್ಟಿಯ ಆರಂಭ ಮಾಡಿದ್ದರಿಂದ ಪ್ರಜಾಪತಿ/ಕಾಲಪುರುಷನನ್ನು ಇಂದು ಪೂಜಿಸಬೇಕು. ಭಗವಂತ, ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ.

ನಾಳೆ ಮುಂದುವರೆಯುವುದು......
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 19, 2020

ಯುಗಾದಿಯ ಆಚರಣೆ (Ugadiya Aacharane) - 5





ಯುಗಾದಿಯ ಶಾಸ್ತ್ರ ಸಂಪ್ರದಾಯಗಳ ಗುರಿಯು ಪುರಷಾರ್ಥಗಳ ಸಿದ್ಧಿ. ಅಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕೂ ಫಲಗಳನ್ನು ಪಡೆಯುವುದೇ ಆಗಿದೆ.

ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲದಕ್ಕೂ ಒಳ್ಳೆಯದನ್ನು ಮಾಡುವ ಪದಾರ್ಥಗಳನ್ನು ಅಂದು ಸೇವಿಸಬೇಕೆಂಬುದೇ ಇದರ ಉದ್ದೇಶ. ಯಾಂತ್ರಿಕವಾಗಿ ಸೇವನೆ ಮಾಡದೆ ಸಂಕಲ್ಪ ಸಹಿತವಾಗಿ, ಅಂತರಂಗದಲ್ಲಿರುವ ದೇವತೆಗಳ ಆರಾಧನೆಯೊಡನೆ ಸ್ವೀಕರಿಸಬೇಕೆಂದು ಋಷಿಗಳ ಆಶಯ.

ಅಭ್ಯಂಗ: ಪ್ರಾತ:ಕಾಲದಲ್ಲಿ "ಅಭ್ಯಂಗ" ಮಾಡಿಕೊಳ್ಳಬೇಕು. ಎಳ್ಳೆಣ್ಣೆಯಿಂದಲೇ ಅಭ್ಯಂಗ ಮಾಡಿಕೊಳ್ಳುವುದು ಪ್ರಶಸ್ತ. ಅಭ್ಯಂಗವನ್ನು ಪ್ರತಿದಿನವೂ ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು.

ದೃಷ್ಟಿಪಾಟವವನ್ನು ಕೂಡುವುದು. "ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯ ಇವುಗಳನ್ನುಂಟುಮಾಡುವುದು. ಚರ್ಮದ ಆರೋಗ್ಯ, ಸೌಂದರ್ಯ ಧೃಢತೆಗಳನ್ನು ತಂದುಕೊಡುವುದು ಎಂದು ಆಯುರ್ವೇದವು ಹೇಳುತ್ತದೆ. ಇದರಿಂದ ದೈಹಿಕ, ಮಾನಸಿಕ ಎರಡು ವಿಧವಾದ ಆರೋಗ್ಯವು ಕೂಡಿ ಬರುತ್ತದೆ. ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ. ದೇಹವು ಹಗುರವಾಗುತ್ತದೆ. ಅಂದು ಅಚರಿಸಬಹುದಾದ ಆರೋಗ್ಯವ್ರತಕ್ಕೂ ಇದು ನಾಂದಿಯಾಗುತ್ತದೆ. ಭೌತಿಕ ಲಾಭಗಳೊಂದಿಗೆ ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿಸುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, March 18, 2020

ಯುಗಾದಿ - ಶಾರ್ವರಿ ವರ್ಷಾರಂಭ (Ugadi - Sharvari varsharambha) - 4

ಪ್ರಸ್ತುತ ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ. ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಇಂತಹ ಶುಭ ದಿನದಂದು ನಮ್ಮ ಶರೀರದಲ್ಲಿ ನವೀನತೆ ಉಂಟಾಗಲು ಎಳ್ಳೆಣ್ಣೆಯಿಂದ ಅಭ್ಯಂಜನವನ್ನು ಮಾಡುವುದಿದೆ. 

ಸೃಷ್ಟಿಕರ್ತನಾದ ಬ್ರಹ್ಮನು ಸೃಷ್ಟಿಯನ್ನು ಮೊದಲು ಮಾಡಿದ ದಿನ. ಕೃತಯುಗದ ಪ್ರಾರಂಭದ ದಿನ. ಆದ್ದರಿಂದಲೇ ಕೃತಯುಗದ ಲಕ್ಷಣಗಳು ಈ ಯುಗಾದಿ ದಿನದಂದು ಇರುತ್ತದೆ. ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ಕಾ ರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಒಂದು ಪದ್ಧತಿಯನ್ನು ತಂದಿದ್ದಾರೆ. 

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ||

ಬೇವಿನ ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ಲೆಕ್ಕರಸ, ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ.

ಹಬ್ಬವನ್ನು ಸತ್ಯ ವಿಧಾನವಾದ ಮನಸ್ಸಿನಿಂದ, ನಿಷ್ಠೆಯಿಂದ ಆಚರಿಸೋಣ. ಹಬ್ಬದ ಸಂಪೂರ್ಣ ಪ್ರಯೋಜನವನ್ನು ಪಡೆಯೋಣ. ವಿಶ್ವವನ್ನೆಲ್ಲಾ ವ್ಯಾಪಿಸಿ ಬೆಳಗುತ್ತಿರುವ ಲೋಕವಂದ್ಯನೂ ಮಹಾಯೋಗೇಶ್ವರನೂ, ಸುರೇಶ್ವರನೂ ಆದ ಭಗವಂತನನ್ನು ನಮ್ಮಲ್ಲಿ ನಾವು ಕಾಣುವಂತಾಗಲಿ. ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯು ದೊರಕಲಿ.

ನಾಳೆ ಮುಂದುವರೆಯುವುದು.......
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 17, 2020

ಯುಗಾದಿ - ಹಿನ್ನೆಲೆ (Ugadi - Hinnele) - 3

ಯುಗಾದಿಯನ್ನು ಒಂದು ಪರ್ವ ಎಂದು ಕರೆಯುತ್ತಾರೆ. ಪರ್ವ ಎಂದರೆ ಗಿಣ್ಣು ಎಂದರ್ಥ. ಕಬ್ಬಿನಲ್ಲಿ ಗಿಣ್ಣುಗಳನ್ನು ನೋಡುತ್ತೇವೆ. ಈ ಗಿಣ್ಣುಗಳಿಗೆ ಪರ್ವ ಎಂದು ಹೆಸರು. ಇದು ಹಳೆಯದಕ್ಕೆ ಅಂತ್ಯ, ಮುಂದಿನದಕ್ಕೆ ಪ್ರಾರಂಭ. ಒಂದು ಸಂಧಿಯ ಕಾಲ.
ಇಂತಹ ಸಂಧಿಕಾಲದಲ್ಲಿ ನಮ್ಮ ಶರೀರದಲ್ಲಿ ಭಗವತ್ ಕಾರ್ಯಕ್ಕೆ ಅನುಕೂಲತೆ ಏರ್ಪಡುತ್ತದೆ. ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಅಂತಹ ವಿಶೇಷ ದಿನಗಳಲ್ಲಿ ಯುಗಾದಿ ಒಂದು. ರಾತ್ರಿ ಕಳೆದು ಹಗಲು, ಹಗಲು ಕಳೆದು ಮಧ್ಯಾಹ್ನ, ಮಧ್ಯಾಹ್ನ ಕಳೆದು ರಾತ್ರಿ. ಹೀಗೆ ಒಂದು ದಿನದಲ್ಲಿ ಮೂರು ಸಂಧ್ಯಾಕಾಲಗಳು ಸಂಭವಿಸುತ್ತದೆ. ಈ ಸಂಧ್ಯಾಕಾಲಗಳು ಯೋಗಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನ, ಪ್ರಾರ್ಥನೆ, ಭಜನೆ, ಪೂಜಾ, ಮಂಗಳಾರತಿಗೆ ಯೋಗ್ಯಕಾಲ. ಸಂಧ್ಯಾಕಾಲದಲ್ಲಿ ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಕಾಲ. ಹಾಗೆಯೇ ಇಡೀ ಒಂದು ವರ್ಷದಲ್ಲಿ ಆತ್ಮಸಾಧನೆಗೆ, ಭಗವಂತನ ಅನುಗ್ರಹಕ್ಕೆ ಯೋಗ್ಯ ಕಾಲಗಳು ಒದಗಿಬರುತ್ತದೆ. ಅಂತಹ ದಿನಗಳಲ್ಲಿ ಗ್ರಹ, ನಕ್ಷತ್ರಾದಿಗಳಲ್ಲಿ ಯೋಗ ಉಂಟಾದಾಗ ಅವುಗಳನ್ನು ಹಬ್ಬಗಳನ್ನಾಗಿ ಆಚರಿಸುತ್ತಿದ್ದೇವೆ. ಗಣೇಶನ ಅನುಗ್ರಹಕ್ಕೆ ಅನುಕೂಲವಾದ ತಿಥಿ, ಪಕ್ಷದಂದು ಗಣಪತಿ ವ್ರತ ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರಾದ ಆರ್ಯ ಋಷಿಗಳು ಆಯಾ ದೇವತಾ ಅನುಗ್ರಹಕ್ಕೆ ಸಹಜವಾಗಿ ಯೋಗ ಕೂಡಿಬರುವುದನ್ನು ಗುರುತಿಸಿ ಹಬ್ಬಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿರುತ್ತಾರೆ. ಹಬ್ಬ ಯಾವ ಋತುವಿನಲ್ಲಿರುತ್ತದೆಯೋ ಅದಕ್ಕೆ ತಕ್ಕಂತಹ ಆಹಾರ, ಭಕ್ಷ್ಯ ಅಂದು ಮಾಡುವ ಸಂಪ್ರದಾಯವಿದೆ. ಆಯಾ ದೇವತಾ ಪ್ರಸನ್ನತೆಗೆ ನಮ್ಮೀ ಶರೀರವು ಬಿಟ್ಟುಕೊಡುವಂತೆ ನಮ್ಮಲ್ಲಿ ಧಾತುಸಾಮ್ಯತೆ ಉಂಟಾಗುವಂತೆ ಮಾಡುವ ವ್ಯವಸ್ಥೆ ಇದು. ರಾಮನವಮಿಯಲ್ಲಿ ಬಿಸಿಲ ಬೇಗೆಗೆ ಶರೀರದಲ್ಲಿಯ ಉಷ್ಣತೆ ಕಡಿಮೆ ಮಾಡಿ ಧಾತು ಸಾಮ್ಯತೆ ತರಲು ಕೋಸಂಬರಿ, ಪಾನಕ, ಗಣೇಶ ಚತುರ್ಥಿಯಂದು ಮೂಲಾಧಾರಕ್ಕೆ ಪುಷ್ಟಿಯನ್ನು ನೀಡುವ ಚಕ್ಕಲಿ ಭಕ್ಷ್ಯ ಸೇವನೆ ಮಾಡುವ ಕ್ರಮ ಇರುವುದಾಗಿದೆ. ನಾಳೆ ಮುಂದುವರೆಯುವುದು....... ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, March 16, 2020

ಯುಗಾದಿ - ಜಿಜ್ಞಾಸೆ (Ugadi - Jignase) - 2



ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ಮಾ ಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ಪ್ರ ವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ.

ನಾಳೆ ಮುಂದುವರೆಯುವುದು......
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಋಷಿದೃಷ್ಟಿ (Ugadi - Rushi drusti) - 1



ಯುಗಾದಿಹಬ್ಬ ಎಂದರೆ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ, ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿ ಅನುಭವಗಳನ್ನು ಸಂಪೂರ್ಣ ಭಗವದರ್ಪಣೆ ಮಾಡುತ್ತೇವೆ. ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ಇಂದು ವರ್ಷಾದ್ಯಂತ ಆಚರಿಸುವ ಸತ್ಕಾರ್ಯ, ಜಪ ಮುಂತಾದ ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಲು, ಸಂಕಲ್ಪ ಮಾಡಲು ಪ್ರಶಸ್ತವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ


To know more about Astanga Yoga Vijnana Mandiram (AYVM) please visit our Official Website, Facebook and Twitter pages