Saturday, November 14, 2020

ಶ್ರೀರಂಗ ವಚನಾಮೃತ (Sriranga Vachanamruta) - 759

ಸಾಮಾನ್ಯ ಜನರು ರಾಕೆಟ್(Rocket)ನ್ನು ಬಿಟ್ಟರೆ ಚಂದ್ರಲೋಕವನ್ನು ತಲುಪಿತು ಎಂದು ಆಶ್ಚರ್ಯಪಡುತ್ತಾರೆಯೇ ಹೊರತು ಅದರಲ್ಲಿ ಏನೇನು ಇಟ್ಟಿದ್ದಾರೆ ಎಂದು ನೋಡುವುದಿಲ್ಲ. ಬುದ್ಧಿಗೆ ಒಂದು ವಿಷಯವಿಲ್ಲ. ಮೇಲುಗಡೆ ನೋಟದಿಂದ ಮಾತ್ರ ರಾಕೆಟ್ನೋಡಿದೆ ಎನ್ನುತ್ತಾರೆಯೇ ಹೊರತು ಅದರ ಬಗ್ಗೆ ಪರಿಚಯವಿಲ್ಲ. ಅದೇ ಸೈಂಟಿಸ್ಟ್(Scientist) ಅದನ್ನು ನೋಡಿದರೆ, ಅವನು ನೋಡುವ ವಿಧಾನವೇ ಬೇರೆ. ಅದರ ಮೆಕ್ಯಾನಿಸಂ ಏನು? ಅದರ ಗುಟ್ಟೇನು? ರಚನಾ ವಿಧಾನವೇನು? ಎಂದು ಎಲ್ಲವನ್ನೂ ನೋಡುತ್ತಾನೆ. ಆದರೆ ಆ ದೃಷ್ಟಿ ಇಲ್ಲದಿದ್ದರೆ ಹೊರನೋಟ ಮಾತ್ರ. ಅಂತೆಯೇ ಒಂದು ದೇವಾಲಯವನ್ನು ನೋಡುವಾಗಲೂ ಒಂದು ದೃಷ್ಟಿಕೋಣಬೇಕು. ಅಲ್ಲಿ ಹೊರಗಣ್ಣಿಗೆ ಮಾತ್ರ ವಿಷಯವಿಲ್ಲ. ಮನಸ್ಸಿಗೂ, ಬುದ್ಧಿಗೂ, ಆತ್ಮಕ್ಕೂ ಅಲ್ಲಿ ವಿಷಯವಿದೆ. ದೃಷ್ಟಿಯನ್ನು ವಿಶಾಲಗೊಳಿಸಿ ನೋಡಿದರೆ ಅದನ್ನು ನೋಡುವುದಕ್ಕೆ ಸಹಾಯವಾಗುತ್ತದೆ. ದೃಷ್ಟಿ ವಿಶಾಲವಾಗುವುದು ಎಂದರೆ ಹೊರಗಣ್ಣು ಆಗಲವಾಗುವುದು ಎಂದಲ್ಲ. ಹಿಂದೆ ಕಣ್ಣು ನೋಡಿದಾಗ ಎಷ್ಟು ವಿಷಯ ಗ್ರಹಿಸುತ್ತಿತ್ತೋ ಅದಕ್ಕಿಂತಲೂ ಹೆಚ್ಚಿನ ಅಂಶ ತಿಳಿದು ಬರುವುದು ಎಂದು ಅರ್ಥ. ಅದು ಒಳಜೀವನಕ್ಕೂ ಹೊರಜೀವನಕ್ಕೂ ಒಂದು ಅಪ್ರತಿಹತವಾದ ದೃಷ್ಟಿಯನ್ನು ಕೊಡುತ್ತದೆ. ಸತ್ಯವೂ, ಶಿವವೂ, ಸುಂದರವೂ ಆದ ಜೀವನದ ಬಗ್ಗೆ ಒಂದು ನೋಟವನ್ನು ಕೊಡುತ್ತದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages